ಪ್ರಾಪ್ತವಯಸ್ಕತೆ

ತನ್ನ ವ್ಯವಹಾರಗಳನ್ನು ತಾನೇ ನಿರ್ವಹಿಸಲು ಮತ್ತು ನಾಗರಿಕ ಹಕ್ಕುಗಳನ್ನನುಭವಿಸಲು ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿಗೆ ಅರ್ಹತೆ ಪ್ರಾಪ್ತವಾಗುವ ವಯಸ್ಸು. ಹದಿನೆಂಟು ವರ್ಷ ತುಂಬಿದ ವ್ಯಕ್ತಿ ಪ್ರಾಪ್ತವಯಸ್ಕನೆಂದು 1875ರ ಭಾರತದ ಪ್ರಾಪ್ತ ವಯಸ್ಕತೆ ಅಧಿನಿಯಮದ ಮೂರನೆಯ ಪ್ರಕರಣದಲ್ಲಿ ಹೇಳಲಾಗಿದೆ.

	1890ರ ಪೋಷಕರು ಮತ್ತು ಸಂರಕ್ಷಿತರ ಅಧಿನಿಯಮದ ಮೇರೆಗೆ ಅಪ್ರಾಪ್ತ ವಯಸ್ಕನೊಬ್ಬನಿಗೆ ಪೋಷಕನ ನೇಮಕವಾಗಿದ್ದರೆ ಆಗ ಆತ ಇಪ್ಪತ್ತೊಂದು ವರ್ಷ ತುಂಬಿದಾಗ ಪ್ರಾಪ್ತ ವಯಸ್ಕನೆನಿಸಿಕೊಳ್ಳುತ್ತಾನೆ.

	ಒಬ್ಬ ವ್ಯಕ್ತಿ ಪ್ರಾಪ್ತವಯಸ್ಕನೆನಿಸಿಕೊಳ್ಳುವುದರಲ್ಲಿ ಮಹತ್ತರವಾದ ಅರ್ಥವಿದೆ. ಪ್ರಾಪ್ತ ವಯಸ್ಕನಾಗದವನು ಕಾನೂನು ರೀತ್ಯ ಅನೇಕ ವಿಧಗಳಲ್ಲಿ ವ್ಯವಹರಿಸಲು ಆತಂಕವಿರುತ್ತದೆ. ಅಪ್ರಾಪ್ತವಯಸ್ಕನಾದವನು ಇನ್ನೊಬ್ಬ ವ್ಯಕ್ತಿಯೊಂದಿಗೆ ವಿಧಿಸಮ್ಮತ ಒಪ್ಪಂದ ಮಾಡಿಕೊಳ್ಳಲು ಅಡ್ಡಿಯುಂಟು. ಆಪ್ರಾಪ್ತವಯಸ್ಕನೊಡನೆ ಮಾಡಿಕೊಂಡ ಒಪ್ಪಂದ ಶೂನ್ಯವೆನಿಸುತ್ತದೆ.

	ಒಬ್ಬ ವ್ಯಕ್ತಿ ಪ್ರಾಪ್ತವಯಸ್ಕನೇ ಅಲ್ಲವೇ ಎಂಬುದನ್ನು ನಿರ್ಧರಿಸುವಾಗ ಆತ ಹುಟ್ಟಿದ ದಿನವನ್ನು ಸಂಪೂರ್ಣ ದಿನವೆಂದು ಪರಿಗಣಿಸಬೇಕು. ಅವನ ಜನನ ವಾರ್ಷಿಕದ ಆರಂಭದಲ್ಲಿ ಅವನು ಪ್ರಾಪ್ತವಯಸ್ಕತೆ ಪಡೆಯುತ್ತಾನೆಂದು ತಿಳಿಯಬೇಕು. ಭಾರತೀಯ ಪ್ರಾಪ್ತವಯಸ್ಕತೆ ಆಧಿನಿಯಮದ ಪ್ರಕಾರ ವಿಧಿ ಸಮ್ಮತ ರೀತಿಯಲ್ಲಿ ಅವನಿಗೆ ಪೋಷಕನ ನೇಮಕವಾಗಿದ್ದರೆ ಅವನ ಜನನದ 21ನೆಯ ವಾರ್ಷಿಕಾರಂಭದಲ್ಲಿ ಅವನು ಪ್ರಾಪ್ತವಯಸ್ಕತೆ ಪಡೆಯುವನೆಂದು ತಿಳಿಯತಕ್ಕದ್ದು.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ